ಉನ್ಮಾದವಿಷಣ್ಣತಾ ಮನೋವಿಕ್ಷಿಪ್ತಿ
	
ಗಂಭೀರ ಸ್ವರೂಪದ ಮನೋರೋಗಗಳಲ್ಲಿ ಒಂದು (ಮೇನಿಕಾ ಡಿಪ್ರೆಸಿವ್ ಸೈಕೋಸಿಸ್). ತೀವ್ರವಾದ ಏರಿಳಿತಗಳಿಂದ ಕೂಡಿದ ಭಾವವಿಕಾರ. ಈ ರೋಗಕ್ಕೀಡಾದ ವ್ಯಕ್ತಿಯ ಮನಃಸ್ಥಿತಿಯಲ್ಲಿ ಅಪಾರವಾದ ಬದಲಾವಣೆಗಳುಂಟಾಗುತ್ತವೆ. ಮುಖ್ಯವಾಗಿ ವ್ಯಕ್ತಿ ಒಮ್ಮೆ ಉನ್ಮತ್ತನಾಗಿ ಇನ್ನೊಮ್ಮೆ ಖಿನ್ನನಾಗಿ ವರ್ತಿಸುತ್ತಾನೆ. 
	
ಪ್ರತಿಯೊಂದು ಸಮಾಜದಲ್ಲೂ ಸುಮಾರು ಶೇಕಡಾ ಒಂದರಷ್ಷು ಜನರಲ್ಲಿ ಭಾವ ವಿಕಾರಗಳು ಕಾಣಿಸಿಕೊಳ್ಳುತ್ತವೆ. ಉನ್ಮಾದ ವಿಷಣ್ಣತಾ ರೋಗದಲ್ಲಿ ಕಂಡುಬರುವ ಚಿಹ್ನೆಗಳು ವಾಸ್ತವವಾಗಿ ಎಲ್ಲರಲ್ಲೂ ಕಂಡುಬರವ ಖಿನ್ನತೆ-ಸಂತೋಷಗಳ ಅತಿಯಾದ ಉತ್ಪ್ರೇಕ್ಷೆ. ಎಲ್ಲರೂ ಒಂದಲ್ಲ ಒಂದು ಸಮಯದಲ್ಲಿ ಬೇಸರ ಖಿನ್ನತೆ ಚಿಂತೆ ದುಃಖ ಪಾಪಭಾವಗಳಿಗೂ ತಾನು ನಿಷ್ಟ್ರಯೋಜಕ, ತನ್ನ ಬದುಕು ನಿರರ್ಥಕ, ಎಂಬ ಭಾವನೆಗಳಿಗೂ ಈಡಾಗಿಯೇ ಇರುತ್ತಾರೆ. ಹಾಗೆಯೇ ಎಲ್ಲರಿಗೂ ಒಂದಲ್ಲ ಒಂದು ಸಮಯದಲ್ಲಿ ಕಾರಣವಿಲ್ಲದೆ ಅಪಾರವಾದ ಖುಷಿ ಸಂತೋಷಗಳಿರುತ್ತವೆ. ತನ್ನನ್ನು ಯಾರೂ ಹಿಡಿಯಲಾರರೆಂಬ ಉತ್ಸಾಹವೂ ಇರುವುದುಂಟು. ಏನನ್ನಾದರೂ ಸಾಧಿಸಿಯೇನೆಂಬ ಆತ್ಮವಿಶ್ವಾಸವೂ ಧೈರ್ಯವೂ ಬರುತ್ತಿರುತ್ತದೆ. ಎಂಥ ಕಷ್ಟದ ಕೆಲಸವನ್ನಾದರೂ ಎಷ್ಟೇ ಹೊತ್ತಾದರೂ ಮಾಡಿ ಮುಗಿಸುವ ಶಕ್ತಿ ಸಾಮಥ್ರ್ಯಗಳೂ ಯಾರು ಏನು ಕೇಳಿದರೂ ಓಹೋ ಅದಕ್ಕೇನು ಎಂಬ ಒಳ್ಳೆಯತನ ಧಾರಾಳತನಗಳೂ ಕೊನೆಯಿಲ್ಲದ ಆಕಾಂಕ್ಷೆಗಳೂ ಯೋಜನೆಗಳೂ ಅವನ್ನೆಲ್ಲ ಸಾಧಿಸಬೇಕೆಂಬ ಆಸೆ ಛಲಗಳೂ ಎಲ್ಲರ ಅನುಭವಕ್ಕೂ ಒಳಪಟ್ಟ ಭಾವಗಳೇ. ಇವುಗಳೆಲ್ಲ ಒಂದು ಮಿತಿಯೊಳಗೆ ಉಳಿದು, ವಾಸ್ತವಿಕತೆಯನ್ನು ಮರೆಯದೆ ಇದ್ದರೆ ವ್ಯಕ್ತಿ ಆರೋಗ್ಯವಂತನಾಗಿಯೇ ಇರುತ್ತಾನೆ. ಆದರೆ ಈ ಭಾವಗಳು ಮಿತಿಮೀರಿ ಹೋಗಿ ಆತ ವಾಸ್ತವ ಸ್ಥಿತಿಯನ್ನೇ ಮರೆತಾಗ ಉನ್ಮಾದವಿಷಣ್ಣತಾ ರೋಗ ತಲೆಹಾಕಿದೆಯೆನ್ನಬಹುದು. 
	
ವಿಷಾದಕ್ಕೀಡಾಗುವ ರೋಗಿಗಳೇ ಹೆಚ್ಚಾದರೂ ಅನೇಕ ರೋಗಿಗಳ ಮನಃಸ್ಥಿತಿ ಉನ್ಮತ್ತತೆಯಿಂದ ವಿಷಾದಕ್ಕೆ, ವಿಷಾದದಿಂದ ಉನ್ಮತ್ತತೆಗೆ ತುಯ್ಯತ್ತಿರುತ್ತದೆ. ಈ ರೋಗಿಗಳು ಈ ಹೊತ್ತು ಉನ್ಮತ್ತರಾಗಿ, ಆನಂದತುಂದಿಲರಾಗಿ, ತಮಾಷೆಯಾಗಿ, ತಮ್ಮನ್ನು ಬಿಟ್ಟರೆ ಇಲ್ಲ ಎಂದುಕೊಂಡು ಅತಿಯಾದ ಚಟುವಟಿಕೆಯಿಂದ ತಿರುಗಾಡಿಕೊಂಡಿದ್ದು. ಇನ್ನೊಂದು ಹೊತ್ತು ಎಣೆಯಿಲ್ಲದ ದುಃಖ ಚಿಂತೆ ಆಯಾಸ ಬೇಸರಗಳಿಂದ ಕೂಡಿ, ತಾವು ನಿಷ್ಷ್ರಯೋಜಕರು, ಮಹಾಪಾಪಿಗಳು, ಅಯೋಗ್ಯರು ಎಂಬ ಭಾವನೆಯಿಂದ ಪೂರ್ತಿ ಮನಸ್ಸು ಕುಂದಿ ಮೂಲೆ ಹಿಡಿದಿರುತ್ತಾರೆ. 
	
ಗಂಡಸರಿಗಿಂತ ಹೆಂಗಸರಲ್ಲಿ ವಿಷಣ್ಣತಾ ಪ್ರತಿಕ್ರಿಯೆ (ಖಿನ್ನತೆ) ಸ್ವಲ್ಪ ಹೆಚ್ಚು. ಖಿನ್ನತೆ ಕ್ರಮೇಣ ಕಾಣಿಸಿಕೊಳ್ಳುವುದಾದರೂ ಕೆಲವು ದಿನಗಳಲ್ಲೇ ಇದು ತೀವ್ರವಾಗಬಹುದು. ಸಾಮಾನ್ಯವಾಗಿ ಈ ಪ್ರತಿಕ್ರಿಯೆ ಕಾಣಿಸಿಕೊಳ್ಳುವುದು ಜೀವನದಲ್ಲಿ ಒಂದಲ್ಲ ಒಂದು ವಿಧವಾದ ಕೆಡುಕು ಆದಾಗ. ಉದಾಹರಣೆಗೆ. ತುಂಬ ಪ್ರೀತಿಸಿದವರ ಸಾವು, ಪ್ರೇಮ ಭಂಗ, ಇದ್ದಕ್ಕಿದ್ದಂತೆ ಕೆಲಸ ಕಳೆದುಕೊಳ್ಳುವುದು, ವ್ಯವಹಾರದಲ್ಲಿ ನಷ್ಟ ಹೊಂದುವುದು-ಇತ್ಯಾದಿ ದುರ್ಘಟನೆಗಳು ಖಿನ್ನತೆಗೆ ಎಡೆಕೊಡಬಹುದು. ಅಪರೂಪವಾಗಿ ಕೆಲವರಿಗೆ ವಿಶೇಷ ಬಡ್ತಿ ದೊರೆತು, ಮೇಲಿನ ಹುದ್ದೆಗೆ ಹೋದಾಗ ಅವರಲ್ಲಿ ಖಿನ್ನತೆ ಕಾಣಿಸಿಕೊಳ್ಳಬಹುದು. 
	
ವಿಷಣ್ಣತಾ ಪ್ರತಿಕ್ರಿಯೆಯ ಪ್ರಾರಂಭದಲ್ಲಿ ವ್ಯಕ್ತಿಗಳ ಉತ್ಸಾಹ ಕುಂದು ಅವರ ಸಾಮಾನ್ಯ ಚಟುವಟಿಕೆಗಳೆಲ್ಲ ಕಡಿಮೆಯಾಗುತ್ತವೆ. ಜೊತೆಗೆ ತಾವೇನು ಇನ್ನು ಮುಳುಗಿಯೇ ಹೋದೆವು ಎಂಬ ಹತಾಶಭಾವವೂ ಕಾರಣವಿಲ್ಲದ ಶಾರೀರಿಕ ಬೇನೆಗಳೂ ತಲೆದೋರುತ್ತವೆ. ತಾವೇನೋ ಮಹತ್ತರವಾದ ಪಾಪ ಮಾಡಿದವರು. ತಮಗಿನ್ನು ಕ್ಷಮೆ ಇಲ್ಲ. ಶಾಂತಿ ಇಲ್ಲ ಎಂಬ ದೃಢವಾದ ನಂಬಿಕೆ ರೋಗಿಗಳನ್ನು ಕಾಡುತ್ತದೆ: ಅವರು ಬದುಕಿನ ಉತ್ಸಾಹವನ್ನೆಲ್ಲ ಕುಂದಿಸುತ್ತದೆ. ಕೆಲವು ಖಿನ್ನರೋಗಿಗಳು ತಳಮಳದಿಂದ ಕೂಡಿರುತ್ತಾರೆ. ಖಿನ್ನರಾಗಿದ್ದರೂ ಇವರು ಸುಮ್ಮನೇ ಇರಲಾರರು. ಉದ್ವಿಗ್ನರಾಗಿ, ವ್ಯಗ್ರರಾಗಿ ಕೂತಲ್ಲಿ ಕೂರಲಾರದೆ ನಿಂತಲ್ಲಿ ನಿಲ್ಲಲಾರದೆ ವಿಪರೀತವಾಗಿ ಸಂಕಟ ಪಡುತ್ತಾರೆ. ಇನ್ನು ಕೆಲವು ವಿಷಾದ ರೋಗಿಗಳು ಒಂದಿಷ್ಟೂ ಚುರುಕು-ಚಟುವಟಿಕೆಗಳಿಲ್ಲದೆ ಮಂದಬುದ್ಧಿಯವರಂತೆ ಮೂಲೆ ಹಿಡಿದಿರುತ್ತಾರೆ. 
	
ಖಿನ್ನತೆ ಉಲ್ಬಣಿಸಿದಾಗ ಈ ರೋಗಿಗಳು ನಿದ್ದೆ ಕಳೆದುಕೊಳ್ಳುತ್ತಾರೆ. ಹಸಿವು ಪೂರ್ತಿ ಕುಂದಿಹೋಗುತ್ತದೆ. ದಿನ ದಿನಕ್ಕೆ ಮೈ ಬಡವಾಗುತ್ತ್ತದೆ. ತಾವು ಮಾಡಿದ ಮಹಾ ಪಾಪಕ್ಕಾಗಿ ಕ್ರೂರವಾದ ಶಿಕ್ಷೆಗೆ ಅರ್ಹರೆಂಬ ಭ್ರಾಂತಿ ತಲೆದೋರುತ್ತದೆ. ಇನ್ನೂ ತೀವ್ರವಾದ ಪರಿಸ್ಥಿತಿಯಲ್ಲಿ ರೋಗಿಗಳಿಗೆ ತಮ್ಮ ಸೋಲು ಚಾರಿತ್ರಿಕವೆನಿಸಿ, ತಾವು ಜಗತ್ಟ್ರಸಿದ್ಧ ಕೊಲೆಗಡುಕರಾಗಿ ಕಾಣಿಸಿಕೊಳ್ಳಬಹುದು. ತಾವು ಬದುಕಲು ಅನರ್ಹರು ಎಂಬ ಭಾವ ಅನೇಕ ರೋಗಿಗಳನ್ನು ಆತ್ಮಹತ್ಯೆಗೆ ಪ್ರಯತ್ನಿಸುವಂತೆ ಮಾಡುತ್ತದೆ. ಎಚ್ಚರಿಕೆ ವಹಿಸದಿದ್ದರೆ ಕೆಲವರು ನಿಜವಾಗಿಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. 
	
ಖಿನ್ನತೆಯ ಬಗ್ಗೆ ಮೂರು ಬಗೆಯ ವಿವರಣೆಗಳಿವೆ: 1 ವ್ಯಕ್ತಿ ತನಗೆ ಬೇಕಾದವರ ಪ್ರೀತಿವಿಶ್ವಾಸಗಳನ್ನು ಅಥವಾ ಆರ್ಥಿಕ ಸುಭದ್ರತೆಯನ್ನು ಕಳೆದುಕೊಂಡಾಗ ತೋರಿಸುವ ಪ್ರತಿಕ್ರಿಯೆ: 2 ಆತ್ಮಾಭಿಮಾನಕ್ಕೆ ಧಕ್ಕೆ ಉಂಟಾದಾಗ ತೋರಿಸುವ ಪ್ರತಿಕ್ರಿಯೆ: 3 ವಾಸ್ತವವಾಗಿಯೂ ರೋಗಿ ಮಾಡಿದ ತಪ್ಪಿಗೆ. ಪಾಪಕ್ರಿಯೆಗೆ ಆತ ತೋರಿಸುವ ಪ್ರತಿಕ್ರಿಯೆ. 
	
ಅಲ್ಪಸ್ವಲ್ಟ ಉನ್ಮತ್ತತೆ ವಿಕೃತವೇನಲ್ಲ. ವಿಕೃತವೆನ್ನಿಸಿಕೊಳ್ಳುವ ಉನ್ಮಾದದಲ್ಲಿ ಎರಡು ಮಟ್ಟಗಳನ್ನು ಗುರುತಿಸಲಾಗಿದೆ. ತೀವ್ರೋನ್ಮಾದ ಮತ್ತು ಉನ್ಮಾದ ಸನ್ನಿ. ಉನ್ಮಾದ ರೋಗಿಗಳು ತೀರಾ ನಾಟಕೀಯವಾಗಿ ವರ್ತಿಸುವುದರಿಂದ ಮನೆಯವರಿಗೆ ಥಟ್ಟನೆ ಇವನಿಗೇನೋ ಆಗಿದೆ ಎಂಬುದು ಗೊತ್ತಾಗುತ್ತದೆ. ತಮ್ಮ ಭಾವೋದ್ರೇಕದಲ್ಲಿ ಉನ್ಮಾದ ರೋಗಿಗಳು ಇತರರನ್ನು ಕೊಲ್ಲಬಹುದು, ತಮ್ಮನ್ನೇ ಕೊಂದುಕೊಳ್ಳಬಹುದು. ಇವರನ್ನು ತಡೆಹಿಡಿಯದಿದ್ದರೆ ಊಟ, ನಿದ್ದೆ, ವಿಶ್ರಾಂತಿ ಒಂದೂ ಇಲ್ಲದೆ ರೋಗಿಗಳು ಪೂರ್ತಿ ಬಳಲೂಬಹುದು. ಉನ್ಮಾದ ಸ್ಥಿತಿಯಲ್ಲಿ ಇವರು ಲೈಂಗಿಕ ಸಾಹಸಗಳಲ್ಲಿ ತೊಡಗಬಹುದು: ಎರಡು ಮೂರು ಮದುವೆ ಮಾಡಿಕೊಳ್ಳಬಹುದು: ಇದ್ದ ಹಣವನ್ನೆಲ್ಲ ನಿಷ್ಟ್ರಯೋಜಕದ ವ್ಯವಹಾರಗಳಲ್ಲಿ, ಧಿಡೀರ್ ಶ್ರೀಮಂತರಾಗುವ ಯೋಜನೆಗಳಲ್ಲಿ ಪೋಲು ಮಾಡಬಹುದು. 
	
ಉನ್ಮತ್ತತೆಯ ಮುಖ್ಯ ಲಕ್ಷಣ ಭಾವವಿಕಾರ. ಉನ್ಮತ್ತರ ಮನಃಸ್ಥಿತಿಯ ಲಕ್ಷಣಗಳೆಂದರೆ ಭಾರೀ ಉದ್ರಿಕ್ತತೆ, ಅಪರಿಮಿತವಾದ ಆನಂದ, ಮಹೋನ್ನತವಾದ ಉಲ್ಲಾಸ, ಉತ್ಸಾಹ, ಊಹಿಸಲಾರದಂಥ ಶಕ್ತಿ ಸಾಮಥ್ರ್ಯ, ತನ್ನನ್ನು ಬಿಟ್ಟರೆ ಇಲ್ಲ-ಎಂಬ ಆತ್ಮವಿಶ್ವಾಸ. ಜೊತೆಗೇ ಕಂಡುಬರುವ ಲಕ್ಷಣಗಳೆಂದರೆ ತಾನು ಜಗತ್ತನ್ನಾಳುವ ಪ್ರಭು, ಮಾನಸಿಕ ಆಸ್ಪತ್ರೆ ಸೇರಿರುವುದು ಇಲ್ಲಿರುವ ಹುಚ್ಚರನ್ನು ತನ್ನ ಆಧ್ಯಾತ್ಮಿಕ ಶಕ್ತಿಯಿಂದ ಗುಣಪಡಿಸಲು, ವೈದ್ಯರೇ ಹುಚ್ಚರು-ಎಂಬಿತ್ಯಾದಿ ಭ್ರಾಂತಿಗಳು.
	
ಉನ್ಮತ್ತರ ಕಾರ್ಯಭಾರ ಅಪಾರ. ಒಂದು ಕ್ಷಣವೂ ಅವರಿಗೆ ಬಿಡುವಿಲ್ಲ. ಉಪಯುಕ್ತವಲ್ಲದ ನೂರೆಂಟು ಕೆಲಸಗಳನ್ನು ಈ ಕ್ಷಣವೇ ಅವರು ಮಾಡಿ ಮುಗಿಸಲೇಬೇಕು. ಆದರೆ ಒಂದು ಕೆಲಸಕ್ಕೆ ಕೈ ಹಾಕುವುದರೊಳಗೆ ಇನ್ನೊಂದು ಅವರ ಗಮನ ಸೆಳೆಯುವುದರಿಂದ ದಿನಗಟ್ಟಲೆ ಬಿಡುವಿಲ್ಲದೆ ದುಡಿದರೂ ಇವರು ಏನೊಂದನ್ನೂ ಸಾಧಿಸುವುದಿಲ್ಲ. ತಮ್ಮ ಓಡಾಟದ ರಭಸದಲ್ಲಿ, ಖುಷಿಯಲ್ಲಿ ಇವರು ಜನರನ್ನು ಘಾಸಿಗೊಳಿಸಬಹುದು. ಕುರ್ಚಿ ಮೇಜು ಮುರಿದು ಹಾಕಬಹುದು; ತಮ್ಮ ಕೈಕಾಲನ್ನೇ ಮುರಿದುಕೊಳ್ಳಬಹುದು. ಇವರ ಮಾತಿಗಂತೂ ಕೊನೆಯಿಲ್ಲ. ಹಲವೊಮ್ಮೆ ಉನ್ಮತ್ತರ ಮಾತು ಕೇಳಲು ರಂಜಿಸುತ್ತದೆ ಆದರೆ ಉನ್ಮತ್ತತೆ ಹೆಚ್ಚಾದಂತೆ ಮಾತು ಬರೀ ಬಡಬಡಿಕೆಯಾಗುತ್ತದೆ.
	
ಉನ್ಮತ್ತತೆ ಇನ್ನೂ ಹೆಚ್ಚಾಗಿ, ಉನ್ಮಾದಸನ್ನಿ ಉಂಟಾದಾಗ ರೋಗಿಗಳಿಗೆ ಅವರ ನಡೆನುಡಿಯ ಮೇಲೆ ಇದ್ದಬಿದ್ದ ಹತೋಟಿಯೂ ತಪ್ಪಿಹೋಗುತ್ತದೆ. ರೋಗಿಗಳು ಪೂರ್ತಿ ಗೊಂದಲಗೊಂಡು, ತಾವೆಲ್ಲಿದ್ದೇವೆ, ತಮ್ಮ ಸುತ್ತ ಏನಾಗುತ್ತಿದೆ ಎಂಬುದೊಂದರ ಪ್ರಜ್ಞೆಯೂ ಇಲ್ಲದೆ ಹಾಡುತ್ತ, ಕುಣಿಯುತ್ತ, ಕಿರುಚುತ್ತ, ಕೈಗೆ ಸಿಕ್ಕಿದ್ದನ್ನು ಮುರಿಯುತ್ತ, ಎಸೆಯುತ್ತ, ಕಂಡವರನ್ನು ಬೈಯ್ಯುತ್ತ, ಹೊಡೆಯುತ್ತ, ಮನೆ ತುಂಬ ಮೂತ್ರ ಮಾಡುತ್ತ, ಮಲವಿಸರ್ಜಿಸಿ ಎಸೆಯುತ್ತ ಜೀವದ ಪರಿವೆ ಇಲ್ಲದೆ ಜಿಗಿದಾಡುತ್ತಿರಬಹುದು. ಇವರು ಕೇಳಿದ್ದೇನಾದರೂ ಇಲ್ಲ ಎಂದರೆ, ಹೇಳಿದ್ದೇನಾದರೂ ಸುಳ್ಳು ಎಂದರೆ ಎಗರಿ ಬೀಳಬಹುದು. ಹಲವರಲ್ಲಿ ಈ ಉನ್ಮಾದ ಸನ್ನಿ ಕ್ರಮೇಣ ಕಡಿಮೆಯಾಗಿ ಖಿನ್ನತೆಗೆ ಎಡೆಗೊಡಬಹುದು.
	
ಖಿನ್ನತೆಯ ಸ್ಥಿತಿಯಲ್ಲಿ ಇವರ ಚಿತ್ರ ಇನ್ನೂ ಕರುಣಾಮಯವಾಗುತ್ತದೆ. ಹಲವರು ಒಂದೇ ಸಮನೆ ಅಳುತ್ತಾರೆ. ಹಲಬಗೆಯ ಪಾಪಗಳನ್ನು ತಮ್ಮ ಮೇಲೆ ಆರೋಪಿಸಿಕೊಳ್ಳುತ್ತಾರೆ. ಈ ಪಾಪಿಜನ್ಮಕ್ಕೆ ಏನೂ ಬೇಡವೆಂದು ಉಣ್ಣಲೂ ಕುಡಿಯಲೂ ನಿರಾಕರಿಸುತ್ತಾರೆ. ಅಂಥವರಿಗೆ ಕೊಳವೆಯಿಂದ ಆಹಾರ ಕೊಡಬೇಕಾದದ್ದು ಅನಿವಾರ್ಯ. ಇಂಥವರು ಜೀವಕ್ಕೆ ಅಪಾಯ ತಂದೊಡ್ಡಿಕೊಳ್ಳದಂತೆ ಎಚ್ಚರಿಕೆ ವಹಿಸಬೇಕಾದ್ದೂ ಅವಶ್ಯ. ಉನ್ಮಾದವಿಷಣ್ಣತಾ ಸ್ಥಿತಿಗಳು ಒಂದಾದ ಮೇಲೊಂದರಂತೆ ನಾನಾ ಬಗೆಯಾಗಿ ಪುನರಾವರ್ತಿಸುತ್ತವೆ. ಕೆಲವರಿಗೆ ಒಂದೇ ಸ್ಥಿತಿ ಇರುತ್ತದೆ. ಇಂಥ ಎರಡು ಸ್ಥಿತಿಗಳ ನಡುವೆ ಅವರು ಸಹಜವಾಗಿ ಬದುಕುತ್ತಾರೆ. ಇನ್ನು ಕೆಲವರಿಗೆ ಒಮ್ಮೆ ವಿಷಣ್ಣತೆ, ಆಮೇಲೆ ಸಹಜತೆ, ಅನಂತರ ಉನ್ಮಾದ-ಹೀಗೆ ಈ ಸ್ಥಿತಿಗಳು ಪುನರ್ಭವಿಸುವುದೂ ಉಂಟು. 
	
ಉನ್ಮಾದವಿಷಣ್ಣತಾ ಮನೋವಿಕ್ಷಿಪ್ತಿಗೆ ಒಳಗಾದವರನೇಕರು ಗುಣಹೊಂದಬಹುದು. ಕ್ಲಿಫರ್ಡಬೀಕ್ಸ್ ಇಂಥವರಲ್ಲೊಬ್ಬ. ಈತ ಮನೋರೋಗದ ಆಸ್ಟತ್ರೆಯಲ್ಲಿನ ತನ್ನ ಅನುಭವಗಳನ್ನು ಕುರಿತು ಪುಸ್ತಕ ಬರೆದಿದ್ದಾನೆ. ಇಂಥವರ ಅನುಭವಗಳ ಆಧಾರದ ಮೇಲೆ ಈ ವ್ಯಾಧಿಯನ್ನು ತಡೆಗಟ್ಟಲು ನಾನಾ ಕ್ರಮ ಕೈಗೊಳ್ಳಲಾಗಿದೆ. 
	
ಬೀಕ್ಸ್‍ನಂಥ ಜನ ಅನುಭವಿಸಿದ ತೀವ್ರ ಉನ್ಮಾದ ವಿಷಣ್ಣತಾ ಅನುಭವಗಳು ಪಾಶ್ಚಾತ್ಯರಲ್ಲಂತೂ ಈಗ ತುಂಬ ವಿರಳ. ಬಿಕ್ಕಟ್ಟು ಉದ್ರೇಕಗಳನ್ನು ತಣಿಸಬಲ್ಲ ನೆಮ್ಮದಿಕಾರಕಗಳನ್ನು ಬಳಸಲಾಗುತ್ತಿರುವುದರಿಂದ ಇದು ಹದ್ದುಬಸ್ತಿಗೆ ಒಳಪಟ್ಟಿದೆ. ವಿಷಣ್ಣತೆ ಅತಿಯಾಗಿ, ಇವುಗಳಿಂದ ಅಷ್ಟೇನೂ ಪರಿಣಾಮ ಆಗದಾಗ, ವಿದ್ಯುದಾಘಾತ ಚಿಕಿತ್ಸೆ ಕೊಟ್ಟು ಗುಣಪಡಿಸಲಾಗಿದೆ. ರೋಗಿಯ ಮಿದುಳಿನ ಮೂಲಕ ಲಘು ವಿದ್ಯುತ್ ಪ್ರವಾಹ ಹರಿಸಿದಾಗ ಆತ ಸ್ವಲ್ಪ ಒದರಾಡಿ ಪ್ರಜ್ಞೆ ತಪ್ಪುತ್ತಾನೆ. ಹಲವಾರು ಬಾರಿ ಇಂಥ ಚಿಕಿತ್ಸೆ ನಡೆಸಿದ ಮೇಲೆ ರೋಗಿ ಗುಣಮುಖನಾಗುತ್ತಾನೆ. ಇದರ ಜೊತೆಗೆ ನೆಮ್ಮದಿಕಾರಕಗಳನ್ನೂ ಕೊಡಬಹುದು. 
	
ವಿಷಣ್ಣತಾ ಸ್ಥಿತಿಯ ಮೇಲೆ ವಿದ್ಯುದಾಘಾತ ಚಿಕಿತ್ಸೆಯ ಈ ಸತ್‍ಪರಿಣಾಮಕ್ಕೆ ಕಾರಣಗಳೇನೆಂಬುದು ಮಾತ್ರ ಇನ್ನೂ ಗೊತ್ತಿಲ್ಲ. 
											
(ಎಂ.ಎನ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ